ಕಲ್ಪತರು ನಾಡಿನ ತ್ರಿಭುವನ ಸುಂದರಿ ಈ ಅಮಾನಿ
ಅಮಾನಿಕೆರೆಯ ವಿಹಂಗಮ ನೋಟ ನೀವು ಎಂದಾದರು ತುಮಕೂರಿಗೆ ಬಂದಾಗ ಹಾಗೆ ಒಮ್ಮೆ ಬಂದು ನನ್ನನ್ನು ಭೇಟಿಯಾಗಿ. ಬಹುಶಃ ಆ ನಿಮ್ಮ ಬೇಟಿಯನ್ನು ನಿಮ್ಮ ಜೀವನದ ಅವಿಸ್ಮರಣೀಯ ಕ್ಷಣಗಳಿಂದ ಕೂಡಿರುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅಯ್ಯೋ! ನಿಮಗೆ ನನ್ನ ಪರಿಚಯವನ್ನೇ ಮಾಡಿಕೊಳ್ಳಲಿಲ್ಲ. ಬನ್ನಿ ನನ್ನ ಬಗ್ಗೆ ಹೇಳುತ್ತೇನೆ. ತುಮಕೂರು ನಗರದ ಹೃದಯ ಭಾಗದಲ್ಲಿ, ಕೋಟೆ ಆಂಜನೇಯ ಸ್ವಾಮಿಯ ಎದುರು ಹಸಿರು ಹೊದ್ದು ಶೃಂಗಾರಗೊಂಡ ಮದುವಣಗಿತ್ತಿಯಂತೆ ಕಂಗೊಳಿಸುವ ನಾನೇ ಅಮಾನಿಕೆರೆ. ನಾನು ಒಟ್ಟಾರೆ 500 ಎಕರೆಗಳಷ್ಟು ವಿಸ್ತಾರವಾಗಿದ್ದೇನೆ. ಹೇಳಬೇಕೆಂದರೆ ನಾನು ಇನ್ನು ದೂಡ್ಡದಾಗಿ ಸುಮಾರು 950 ಎಕರೆಯಷ್ಟು ಹರಡಿಕೊಂಡಿದ್ದೆ. ಆದರೆ ಅನೇಕರು ನನ್ನ ಒಂದಷ್ಟು ಭಾಗವನ್ನು ಕಬಳಿಸಿ ಬಿಟ್ಟರು. ಅದರಿಂದಾಗಿ ಸದ್ಯಕ್ಕೆ ಇಷ್ಟನ್ನು ಮಾತ್ರ ಉಳಿಸಿಕೊಂಡಿದ್ದೇನೆ. ಸುಮಾರು 30-40 ವರ್ಷಗಳಷ್ಟು ಹಿಂದೆ ಜಿಲ್ಲಾಧಿಕಾರಿಗಳು ತಮ್ಮ ಕಛೇರಿಗೆ ಹಡಗಿನ ಮೂಲಕ ನನ್ನನ್ನು ದಾಟಿ ತಮ್ಮ ಕಛೇರಿಯನ್ನು ತಲುಪುತ್ತಿದ್ದರು. ಅಷ್ಟರ ಮಟ್ಟಿಗೆ ಮೈದುಂಬಿ ಹರಿಯುತ್ತಿದ್ದೆ. ಅಲ್ಲಿನ ಸುತ್ತ-ಮುತ್ತಲ ಪ್ರಾಣಿ-ಪಕ್ಷಿಗಳು ಬಾಯಾರಿಕೆಯಿಂದ ಬಂದಾಗ ಅವುಗಳ ದಾಹ ನೀಗಿಸುತ್ತಿದ್ದೆ, ಇಷ್ಟು ಮಾತ್ರವಲ್ಲದೆ ಅಲ್ಲಿನ ರೈತರ ಹೊಲಗಳಿಗೂ ನೀರುಣಿಸುತ್ತಿದ್ದೆ. ನನ್ನ ನಂಬಿಬರುತ್ತಿದ್ದ ಎಲ್ಲರಿಗೂ ನಾ ಆಶ್ರಯವಾಗಿದ್ದೆ. ...