ಕಲ್ಪತರು ನಾಡಿನ ತ್ರಿಭುವನ ಸುಂದರಿ ಈ ಅಮಾನಿ
ಅಮಾನಿಕೆರೆಯ ವಿಹಂಗಮ ನೋಟ |
ನೀವು ಎಂದಾದರು ತುಮಕೂರಿಗೆ ಬಂದಾಗ ಹಾಗೆ ಒಮ್ಮೆ ಬಂದು ನನ್ನನ್ನು ಭೇಟಿಯಾಗಿ. ಬಹುಶಃ ಆ ನಿಮ್ಮ ಬೇಟಿಯನ್ನು ನಿಮ್ಮ ಜೀವನದ ಅವಿಸ್ಮರಣೀಯ ಕ್ಷಣಗಳಿಂದ ಕೂಡಿರುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಅಯ್ಯೋ! ನಿಮಗೆ ನನ್ನ ಪರಿಚಯವನ್ನೇ ಮಾಡಿಕೊಳ್ಳಲಿಲ್ಲ. ಬನ್ನಿ ನನ್ನ ಬಗ್ಗೆ ಹೇಳುತ್ತೇನೆ. ತುಮಕೂರು ನಗರದ ಹೃದಯ ಭಾಗದಲ್ಲಿ, ಕೋಟೆ ಆಂಜನೇಯ ಸ್ವಾಮಿಯ ಎದುರು ಹಸಿರು ಹೊದ್ದು ಶೃಂಗಾರಗೊಂಡ ಮದುವಣಗಿತ್ತಿಯಂತೆ ಕಂಗೊಳಿಸುವ ನಾನೇ ಅಮಾನಿಕೆರೆ. ನಾನು ಒಟ್ಟಾರೆ 500 ಎಕರೆಗಳಷ್ಟು ವಿಸ್ತಾರವಾಗಿದ್ದೇನೆ. ಹೇಳಬೇಕೆಂದರೆ ನಾನು ಇನ್ನು ದೂಡ್ಡದಾಗಿ ಸುಮಾರು 950 ಎಕರೆಯಷ್ಟು ಹರಡಿಕೊಂಡಿದ್ದೆ. ಆದರೆ ಅನೇಕರು ನನ್ನ ಒಂದಷ್ಟು ಭಾಗವನ್ನು ಕಬಳಿಸಿ ಬಿಟ್ಟರು. ಅದರಿಂದಾಗಿ ಸದ್ಯಕ್ಕೆ ಇಷ್ಟನ್ನು ಮಾತ್ರ ಉಳಿಸಿಕೊಂಡಿದ್ದೇನೆ. ಸುಮಾರು 30-40 ವರ್ಷಗಳಷ್ಟು ಹಿಂದೆ ಜಿಲ್ಲಾಧಿಕಾರಿಗಳು ತಮ್ಮ ಕಛೇರಿಗೆ ಹಡಗಿನ ಮೂಲಕ ನನ್ನನ್ನು ದಾಟಿ ತಮ್ಮ ಕಛೇರಿಯನ್ನು ತಲುಪುತ್ತಿದ್ದರು. ಅಷ್ಟರ ಮಟ್ಟಿಗೆ ಮೈದುಂಬಿ ಹರಿಯುತ್ತಿದ್ದೆ. ಅಲ್ಲಿನ ಸುತ್ತ-ಮುತ್ತಲ ಪ್ರಾಣಿ-ಪಕ್ಷಿಗಳು ಬಾಯಾರಿಕೆಯಿಂದ ಬಂದಾಗ ಅವುಗಳ ದಾಹ ನೀಗಿಸುತ್ತಿದ್ದೆ, ಇಷ್ಟು ಮಾತ್ರವಲ್ಲದೆ ಅಲ್ಲಿನ ರೈತರ ಹೊಲಗಳಿಗೂ ನೀರುಣಿಸುತ್ತಿದ್ದೆ. ನನ್ನ ನಂಬಿಬರುತ್ತಿದ್ದ ಎಲ್ಲರಿಗೂ ನಾ ಆಶ್ರಯವಾಗಿದ್ದೆ. ನಂತರದ ದಿನಗಳಲ್ಲಿ ಕಾಲದಹೊಡೆತಕ್ಕೆ ಸಿಲುಕಿ ಪೂರ್ತಿಯಾಗಿ ಬರಡಾಗಿ ಹೋದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನಡೆದ ಅನೇಕ ಅಭಿವೃದ್ಧಿ ಕಾಮಗಾರಿಗಳು ಸೊರಗಿ, ಬರಡಾಗಿ, ಹೂಳುತುಂಬಿ ಹೋಗಿದ್ದ ನನ್ನನ್ನು ಮತ್ತೆ ಹೂಸದಾಗಿ ದಿಬ್ಬಣದ ವಧುವಿನಂತೆ ಸಿಂಗರಿಸಿ ಅಲಂಕರಿಸಿದ್ದಾರೆ.
ಅದು ಎಷ್ಟರ ಮಟ್ಟಿಗೆಂದರೆ, ನೀವು ಮೊದಲಿಗೆ ನನ್ನ ಮುಖ್ಯ ದ್ವಾರಕ್ಕೆ ಬಂದರೆ ಅಲ್ಲಿನ ಸಿಬ್ಬಂದಿ ಪ್ರವೇಶ ಶುಲ್ಕವಾಗಿ 10 ರೂಪಾಯಿ ಪಡೆಯುತ್ತಾರೆ. ಅದೇ ಶನಿವಾರ-ಭಾನುವರಗಳಂದು ಮಾತ್ರ 20 ರೂಪಾಯಿ ವಸೂಲಿ ಮಾಡುತ್ತಾರೆ. ನಂತರ ನೀವು ಮುಖ್ಯ ದ್ವಾರದಿಂದ ಎಡಕ್ಕೆ ಚಲಿಸಿದರೆ ತಕ್ಷಣ ನಿಮ್ಮ ಕಣ್ ಸೆಳೆಯುವುದು ಬೆಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಗಾಜಿನ ಮನೆಯನ್ನೇ ಹೋಲುವಂತಹ ಗಾಜಿನ ಮನೆಯನ್ನು ನಿರ್ಮಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಗಾಜಿನ ಮನೆಯಲ್ಲಿ ಕಾಣಸಿಗುವ ನವಿಲಿನ ಚಿತ್ತಾರ ನೋಡುಗರ ಕಣ್ಮನ ಸೆಳಯುವಂತಿದೆ. ಗಾಜಿನ ಮನೆಯಿಂದ ಸ್ವಲ್ಪ ಮುಂದೆ ಬಂದರೆ ಅಲ್ಲಿ ಮನಮೋಹ ನೃತ್ಯಕಾರಂಜಿ ಸಂಗೀತಕ್ಕೆ ತಕ್ಕನಾಗಿ ಕುಣಿಯುವ ನೀರಿನ ನೃತ್ಯ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.
ಮಕ್ಕಳಿಗೆ ಆಟವಾಡುವ ಸಲುವಾಗಿ ನಿರ್ಮಿಸಲಾದ ಆಟೋಪಕರಣಗಳು |
ಪ್ರತಿನಿತ್ಯ ಸಾವಿರಾರು ಜನ ವಾಕಿಂಗ್ ಮಾಡಲೆಂದು, ಮತ್ತೆ ಕೆಲವರು ತಮ್ಮ ಸಂಗಾತಿಗಳೊಂದಿಗೆ ಕಾಲ ಕಳೆಯಲು, ಇನ್ನು ಕೆಲವರು ಕಾಲೇಜಿಗೆ ಬಂಕ್ ಹೊಡೆದು ಸುತ್ತಾಡಲು ಬರುವವರು ಇದ್ದಾರೆ. ಇವರಲ್ಲಿ ಹೆಚ್ಚಿನನದಾಗಿ ನನ್ನ ಬಯಸಿ ಬರುವವರೆಂದರೆ ಅದು ಯುವ ಪ್ರೇಮಿಗಳು. ಅವರೆಲ್ಲರ ಸರಸ-ವಿರಸಗಳನ್ನೆಲ್ಲಾ ನೋಡಿ ನೋಡಿ ಬೇಸತ್ತು ಹೋಗಿದ್ದೇನೆ. ಅದರಲ್ಲು ನನ್ನ ಬಗ್ಗೆ ಸದಾ ಕಾಳಜಿಮಾಡುವ ವಾಚ್‌ಮ್ಯಾನ್ ಅವರನ್ನೆಲ್ಲ ಬೈದು ಕಳಿಸುತ್ತಾನೆ. ಇವೆಲ್ಲದರ ಹೊರತಾಗಿ ನಿಮ್ಮ ಮನಸ್ಸಿಗೆ ಮೂದನೀಡುವು ಸಂಗತಿ ಎಂದರೆ ಹೇಮಾವತಿ ನದಿ ನೀರಿನಿಂದ ಆವೃತವಾಗಿ, ನೀವು ಕಣ್ಣು ಹಾಯಿಸಿದಷ್ಟು ದೂರದವರೆಗೂ ಕಾಣಿಸುವ ನನ್ನ ಸೌಂದರ್ಯ. ಇನ್ನು ನೀರಿನ ಮಧ್ಯ ಭಾಗದಲ್ಲಿ ಕಾಣಸಿಗುವ ದೊಡ್ಡ ದೊಡ್ಡ ದಿಬ್ಬದಂತಹ ರಚನೆಗಳು, ಈ ದಿಬ್ಬಗಳಲ್ಲಿ ಹೆಚ್ಚಿನದಾಗಿ ಪಕ್ಷಿಗಳು ನೆಲೆ ಕಂಡುಕೊಳ್ಳುತ್ತವೆ. ಅದರಲ್ಲು ವಲಸೆ ಬರುವ ಪಕ್ಷಿಗಳಿಗಂತು ಇದು ಹೇಳಿ ಮಾಡಿಸಿದಂತಹ ಸ್ಥಳ. ಈ ದಿಬ್ಬಗಳಲ್ಲಿ ಗರುಡ ಪಕ್ಷಿಗಳೇ ಹೆಚ್ಚಾಗಿ ನೆಲೆಸಿರುವುದು ವಿಶೇಷ ಸಂಗತಿ.! ಇಷ್ಟೆಲ್ಲಾ ಸುತ್ತಾಡಿ ಪೂರ್ತಿಯಾಗಿ ನೀವು ನನ್ನನ್ನು ನೋಡಬೇಕೆಂದರೆ ಕನಿಷ್ಟ ೨-೩ ಗಂಟೆಗಳಾದರು ನೀವು ಬಿಡುವು ಮಾಡಿಕೊಳ್ಳಿ. ಖಂಡಿತವಾಗಿಯು ಹೇಳುತ್ತೇನೆ ನೀವು ನನ್ನನ್ನು ಒಮ್ಮೆ ಭೇಟಿಮಾಡಿದರು ಸಾಕು ನೀವು ಕಳೆಯುವ ಪ್ರತೀಕ್ಷಣವನ್ನು ಸುಂದರವಾಗಿರುವಂತೆ ನೋಡಿಕೊಳ್ಳುತ್ತೇನೆ ಇಂತಿ ನಿಮ್ಮ ಪ್ರೀತಿಯ ಅಮಾನಿ.
(ಈ ನುಡಿಚಿತ್ರ ಪ್ರಜಾ ಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)
Comments
Post a Comment